Monday, November 06, 2006

ಹೊಯ್ದಾಟ

ತಿಳಿನೀಲ ಸೀರೆಯಲಿ ಆಕಾಶದ ಸೊಬಗು
ನೀಳ ಜಡೆಯಲ್ಲಿ ಮಲ್ಲಿಗೆ ಮೊಗ್ಗಿನ ಬೆಡಗು

ತೆಗೆದ ಬೈತೆಲೆಯಲ್ಲಿ ಎಣ್ಣೆಯ ಮಿಂಚು
ಕಿವಿಯೋಲೆ, ಮೂಗುತಿ ತೊಡೆದಿದೆ ಕತ್ತಲ ಸಂಚು

ಕಣ್ಗಪ್ಪಿನ ನಡುವೆ ಹೊಳೆಯುತಿದೆ ಬಿಂದು
ವಿಶ್ವ ಪಥಕೆ ಹಾಕಿದ ಸಿಂಧು

ತುಂಬಿದ ಹಾಲ್ಗೆನ್ನೆಯಲಿ ಅರಶಿನದ ಕಳೆ
ಕೈಯ ಬಳೆಯಲ್ಲಿ ಹರಿಯುತಲಿದೆ, ಸಾಂಪ್ರದಾಯಿಕ ಹೊಳೆ

ತೆಗೆದ ಶ್ರುತಿಯಲ್ಲಿ ಸುಶ್ರಾವ್ಯ ಸಂಗೀತ....

ತಂಬೂರಿ ಹಿಡಿದ ಕೈಗಳು ಬೇಡುತಿವೆ ಹೊಸಗನಸು...

ಬದಲಾಗಿದೆ, ಸೀರೆ ಪ್ಯಾಂಟ್-ಶರ್ಟಿಗೆ, ಎಣ್ಣೆ ಕಾಣದ ಜಡೆ ಕ್ರಾಪಿಗೆ, ಅರಶಿನ ಮೆಕಪ್ಪಿಗೆ
ಮಾಯವಾಗಿದೆ ಮೂಗುತಿ-ಕಿವಿಯೋಲೆ
ಬಳೆಯಿಲ್ಲದ ಕೈಗಳು ಸಾರುತಿವೆ ಆಧುನಿಕತೆ

ಇಂದೂ ನುಡಿಸಲಿಚ್ಚಿಸಿದೆ ಮನ ತಂಬೂರಿ...

ತೆಗೆದ ಶ್ರುತಿಯಲ್ಲಿ ಅಪಸ್ವರವೇನು ಇರಲಿಲ್ಲ
ಆದರೆ ಮೊದಲಿನ ಮಾಧುರ್ಯ ಬರಲಿಲ್ಲ

ಹೊಯ್ದಾಡುತಿದೆ ಮನ ತಂಬೂರಿಯ ಜೊತೆ...

ಮಧುರ ನೆನಪಿನ ಸವಿಯನುಂಡು,
ನವ್ಯ ಬದುಕಿನ ಕನಸ ಕಂಡು.