Tuesday, February 27, 2007

"ಕ(ಪಿ)ವಿ ಮಹಾಶಯ"

ಈ ಲೇಖನ ನಾನು ಪದವಿ ತರಗತಿಯಲ್ಲಿ ಓದುತ್ತಿರುವಾಗ ಬರೆದದ್ದು.. ಸ್ವಲ್ಪ ಬದಲಾವಣೆಗಳೊಂದಿಗೆ ಇಲ್ಲಿದೆ...

"ಕವಿಗಳು" ಎಂದ ತಕ್ಷಣ ಸಾಧಾರಣವಾಗಿ ನೆನಪಿಗೆ ಬರುವುದು ಜುಬ್ಬ-ಪೈಜಾಮ ಧರಿಸಿದ, ಮಾರುದ್ದದ ಜೋಳಿಗೆ ಹಿಡಿದ, ಬಾಯ್ತುಂಬ ಎಲೆ-ಅಡಿಕೆ(ತಾಂಬೂಲ) ಹಾಕಿದ, ಮುಖದ ತುಂಬಾ ಗಡ್ಡ ಹೊಂದಿದ ವ್ಯಕ್ತಿ. ಸಭೆ-ಸಮಾರಂಭಗಳಲ್ಲಿ ಕಾಣ ಸಿಗುವ ಈ ಕವಿಗಳು ಒಳ್ಳೆಯ ಗೌರವ ಹೊಂದಿರುತ್ತಾರೆ ಎನ್ನುವುದು ನನ್ನ ನಂಬಿಕೆ ಆಗಿತ್ತು. ಅವರಂತೆ ನಾನು ಕೂಡ "ಕವಿ" ಎನ್ನುವ ಪಟ್ಟ ಪಡೆದು ಫಲ-ತಾಂಬೂಲದೊಂದಿಗೆ ಮನೆಗೆ ಬರಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆ ನಡದೇ ಇತ್ತು. ಆ ಕನಸನ್ನು ನನಸಾಗಿಸಲು ಪ್ರಯತ್ನಿಸಿದ್ದು ಒಂದೆರಡು ಬಾರಿಯಲ್ಲ. ಜುಬ್ಬ-ಪೈಜಾಮ, ಸಣ್ಣ ಜೋಳಿಗೆ, ಎಲೆ-ಅಡಿಕೆ ಜೊತೆಗೆ ಹೊಗೆಸೊಪ್ಪು(ಇದರಲ್ಲಿ ಒಂದು ಕೈ ಮುಂದೆ), ಕುರುಚಲು ಗಡ್ಡಕ್ಕೇನೂ ಕೊರತೆ ಇಲ್ಲ(ಸೋಮಾರಿಗಳಿಗೆ ಇದು ಕಷ್ಟವೇ ಅಲ್ಲ). ಹೊರ ನೋಟಕ್ಕೆ ಕವಿಯ ತದ್ರೂಪಿಯ ಸೃಷ್ಟಿ ಆಯಿತು...ಆದರೆ ಸುಮ್ಮನೇ ಕವಿಯ ಪಟ್ಟ ದೊರಕೀತೇ? ಇಲ್ಲ.. ಒಂದೆರಡು ಕವನ ಗೀಚ ಬೇಡವೆ? ನಾನು ನನ್ನ ಸ್ನೇಹಿತರೊಂದಿಗೆ ಈ ಕನಸಿನ ಕುರಿತಾಗಿ ಬಹಳ ಚರ್ಚಿಸಿದ್ದೆ. ಮಾರನೇ ದಿನವೇ ಕವನ ಬರೆಯುವುದಾಗಿ ಪಂಥ ಬೇರೆ ಕಟ್ಟಿದ್ದೆ. ಕೊನೆಗೆ ಮರ್ಯಾದೆ ಉಳಿಸಿಕೊಳ್ಳಲು ಕವನ ಬರೆಯಲು ಶುರು ಮಾಡುವ ನಿರ್ಧಾರಕ್ಕೆ ಬಂದೆ.

ನಮ್ಮೂರಲ್ಲಿ ಮಂಗಗಳು ಬಹಳ. ನವಿಲಿನ ನರ್ತನ, ಹಂದಿ-ನರಿಗಳ ಓಡಾಟ ಕೆಲವೊಮ್ಮೆ ನೋಡಬಹುದು. ಪೃಕೃತಿಯ ಮಡಿಲು ಅನೇಕ ಕವಿಗಳಿಗೆ ಸ್ಪೂರ್ತಿ ನೀಡಿದ್ದು ಓದಿ ತಿಳಿದಿದ್ದೆ. ಹಾಗೆ ಗುಡ್ಡದ ಕಡೆ ಪುಸ್ತಕ-ಪೆನ್ನುಗಳ ಜೊತೆ ಹೊರಟೆ. ಒಂದು ದೊಡ್ಡ ಮರದ ನೆರಳಿನಲ್ಲಿ ಕುಳಿತೆ. ತಾಂಬೂಲದೊಂದಿಗೆ ಹೊಗೆಸೊಪ್ಪು ಬೇರೆ ಸೇರಿ ಒಂದು ತರಹದ ಹೊಸ ಅನುಭವ ನೀಡುತ್ತಿತ್ತು. ಯಾರೋ-ಎಲ್ಲೋ ಓದಿದಂತೆ-ಹೇಳಿದಂತೆ ನೆನಪು. "ಕವನ ಹಾಗೆ ಬರೆಯುತ್ತೇನೆಂದರೆ ಬರುವುದಿಲ್ಲ. ಭಾವನೆಗಳ ಅಲೆಗಳು ಮನಸಿಗಪ್ಪಳಿಸಿದಾಗ ಕವನವೆಂಬ ನೀರು ಚಿಮ್ಮುವುದು." ಪುಸ್ತಕ-ಪೆನ್ನು ಕೈಯಲ್ಲಿತ್ತು. ಏನಾದರು ಭಾವನೆ ಬರುತ್ತದೇನೋ ಅಂತ ಕಾಯುತ್ತ ಕುಳಿತೆ. ಎಷ್ಟು ಹೊತ್ತು ಕುಳಿತರೂ ಒಂದು ಶಬ್ದ ಕೂಡ ಬರಲಿಲ್ಲ. ಮಧ್ಯಾಹ್ನದ ಊಟ ಆಗಿತ್ತು. ಮೂಡಣದ ಕಣ್ಣು ಪಡುವಲದತ್ತ ವಾಲಲು ಶುರು ಆಗಿತ್ತು. ಅದರ ಜೊತೆ ನನ್ನ ಕಣ್ಣು ಕೂಡ..... ಗಡದ್ದಾಗಿ ತಿಂದು ಹೋಗಿದ್ದರಿಂದ, ತಣ್ಣನೆಯ ಗಾಳಿಗೆ ನಿದ್ದೆ ಬರಲು ಶುರು ಆಯಿತೇ ವಿನಃ ಮತ್ತೇನು ಬರಲಿಲ್ಲ. ನನಗೇ ಅರಿವಿಲ್ಲದಂತೆ ಪುಟಗಟ್ಟಲೆ ಗೀಚಿದ ಹಾಗೆ, (ಮಹಾಕವಿ ಕಾಳೀದಾಸ -ಚಿತ್ರ ಬೀರಿದ ಮಾನಸಿಕ ಪರಿಣಾಮ - ಕಾಣದ ಕೈ ಸಹಾಯ ನನಗೂ ಒಲಿದಂತೆ...) ಎಲ್ಲರ ಎದುರಲ್ಲಿ ಹಾರ ಹಾಕಿಸಿಕೊಂಡು, ಶಾಲು ಹೊದೆಸಿಕೊಂಡು, ಫಲ-ತಾಂಬೂಲಗಳೊಂದಿಗೆ ಸತ್ಕರಿಸಿಕೊಂಡು ಬೀಗುತ್ತಿರುವಾಗ...ಮೈಮೇಲೆ ನೀರು ಬಿದ್ದ ಅನುಭವ. ಯಾರೋ ಮಹಾನುಭಾವರು ನನ್ನ ಮೇಲೆ ಸುಗಂಧ ದ್ರವ್ಯದ ಸಿಂಚನ ಮಾಡುತ್ತಿರಬಹುದು ಅಂತ ತುಂಬಾ ಖುಶಿ ಪಟ್ಟೆ. ಯಾರಿಗೂ ಇಲ್ಲದ ಸನ್ಮಾನ ನನಗೆ!!! ಹ ಹ ಹ.... ಪುನಃ ಸಿಂಚನ...ಈಗ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ....ನಾನೀಗ ಸಂಪೂರ್ಣವಾಗಿ ಈ ಲೋಕದಲ್ಲಿದ್ದೆ....ಅದೂ ಮರದ ಕೆಳಗೆ ಕುಳಿತ್ತಿದ್ದೆ...ಶಾಲು, ಫಲ-ತಾಂಬೂಲ ಎಂಥದ್ದು ಬಳಿಯಲ್ಲಿಲ್ಲ...ಆದರೆ ಸಿಂಚನ ಮಾತ್ರ ಸತ್ಯ.. ಅಪವಿತ್ರ ಪವಿತ್ರೋವಾ...ಪುಣ್ಯದ ನೀರನ್ನು ಪುರೋಹಿತರು ದರ್ಬೆ ಹಿಡಿದು ಪ್ರೋಕ್ಷಣೆ ಮಾಡಿದ ಹಾಗೆ!!!!! ಇಲ್ಲಿ ಅದು ಸಾಧ್ಯವಿಲ್ಲ........ ಹತ್ತಿರದಲ್ಲ್ಯಾರೂ ಕಾಣಲಿಲ್ಲ. ಸುತ್ತಲೂ ಕಣ್ಣಾಡಿಸಿದೆ. ಯಾವ ಯಕ್ಷ-ಗಂಧರ್ವ, ಕಿನ್ನರ ಕಿಂಪುರುಷ, ದೇವಾನು-ದೇವತೆಗಳಾಗಲಿ, ದೆವ್ವ-ಭೂತಗಳಾಗಲಿ ಪ್ರತ್ಯಕ್ಷ ಆಗಲಿಲ್ಲ.

ಹಾಗಾದರೆ ಈ ಕೆಲಸ ಯಾರದ್ದು??? ಮೇಲಿಂದ ಟರ್..ಟರ್...ಅನ್ನುವ ದನಿ ಕೇಳಿತು. ಈಗ ಎಲ್ಲ ಸ್ಪಷ್ಟವಾಯಿತು. ಮೇಲೆ ನೋಡಿದರೆ ಮಂಗಗಳ ಹಿಂಡು. ಇನ್ನೊಮ್ಮೆ ಪವಿತ್ರ ಅಪವಿತ್ರೋವ ಆಗುವ ಮೊದಲು ಅಲ್ಲಿಂದ ಓಡಿದೆ . ನನ್ನನ್ನು ಎಬ್ಬಿಸಿದಕ್ಕೆ ಮಂಗಗಳಿಗೆ ಧನ್ಯವಾದ ಹೇಳುವುದು ಅನಿವಾರ್ಯವಾಯಿತು. ಮನೆಯಲ್ಲಿ ನಾನಿಲ್ಲವೆಂಬ ಗೌಜು ಬಿದ್ದಿರುತ್ತದೆನೋ!!!ಈ ಭರದಲ್ಲಿ ನಾನು ಯಾವಾಗ ತಾಂಬೂಲದ ನೀರು ನುಂಗಿದೆನೋ ನಂಗೆ ಗೊತ್ತಿಲ್ಲ.. ಸಣ್ಣಗೆ ತಲೆ ಗಿರ್ ಅನ್ನಲಿಕ್ಕೆ ಶುರು ಆಯಿತು... ಬೇಗ ಬೇಗ ಮನೆಕಡೆ ನಡೆದೆ...

ದೊಪ್...ಅಂಗಳದಲ್ಲಿ ಬಿದ್ದದೊಂದೇ ಗೊತ್ತು...ಕಣ್ಣು ಬಿಡುವಾಗ ಅಡುಗೆ ಮನೆಯಲ್ಲಿ ಅಂಗಾತ ಮಲಗಿದ್ದೆ. ಪಿಳಿ ಪಿಳಿ ಕಣ್ಣು ಬಿಟ್ಟು ಅಟ್ಟ ನೋಡುತ್ತಿದ್ದೆ. ಅಮ್ಮ ಕೈಯಲ್ಲಿ ಮಜ್ಜಿಗೆ ನೀರು ಹಿಡಿದು ನನ್ನ ಬಾಯಿಗೆ ಹಾಕುತ್ತಿದ್ದರು. ಜೊತೆಗೆ ಗಾಳಿ ಕೂಡ. ಬೇಕಿತ್ತ ಈ ಅವಸ್ಥೆ??? (ಅಮ್ಮ ಕೇಳಲಿಲ್ಲ ಅಸ್ಟೆ).

ಮಾರನೇ ದಿನ ಈ ಘಟನೆ ಉತ್ಪ್ರೇಕ್ಷೆಗೊಂಡು ರೆಕ್ಕೆ-ಪುಕ್ಕಗಳೊಂದಿಗೆ ನನ್ನ ಗೆಳೆಯರೆದುರು ಪ್ರಕಟವಾಯಿತು. ಅಂತು ನನ್ನ ಬಹುದಿನದ ಕನಸು ನನಸಾಯ್ತು. ಹೇಗೆ ಗೊತ್ತೇ??? ಗೆಳೆಯರು ಕೊಟ್ಟ ಬಿರುದಿನಿಂದ.... "ಕವಿ ಮಹಾಶಯ" ಎನ್ನುವ ಬದಲಾಗಿ "ಕಪಿ ಮಹಾಶಯ" ಅಂತ ಕರೆದದ್ದರಿಂದ!!! :)

Monday, February 19, 2007

On those innocent eyes....

As we grow, we lose the innocence of childhood.
My camera eyes always look around for those innocent eyes..

Are you taking my photo ???

I won't give this doll to you....

How is my new skirt ??? matching with background right ???

Am I so naughty ;) !!!
Innocent smile :)
Are you going to take my BALL ???? no :(
How about this style ???

Cute isn't it :)