Tuesday, October 02, 2007

ನನ್ನೊಳು ನೀ ನಿನ್ನೊಳು ನಾ!!!

ಕಣ್ಣಿನಲ್ಲಿ ಸೆರೆಹಿಡಿದ ಆ ಚಿತ್ರ ಮರೆಯಲಾಗುತ್ತಿಲ್ಲ!!! ಅದೆಂಥ ತನ್ಮಯತೆ, ತಾದ್ಯಾತ್ಮ!!! ಎಲ್ಲರೂ ಸುತ್ತುವರಿದು ನೋಡುತ್ತಿದ್ದರೂ ಅವಳು ಮಾತ್ರ ಅವನನ್ನು ಬಿಟ್ಟು ಬೇರೇನನ್ನು ನೋಡುತ್ತಿರಲಿಲ್ಲ. ಅವನು ಕೂಡ ಅವಳ ಮುಖವನ್ನೇ ನೋಡುತ್ತಿದ್ದ. ಹಾಗೆ ನೋಡುತ್ತಿದ್ದಂತೆ ಅವಳ ದೃಷ್ಟಿ ನಾಚಿ ಬಾಗಿದಂತೆ ಅನ್ನಿಸಿತು. ಅದು ತನ್ನ ಭ್ರಮೆ ಅಂತ ಖಾತರಿ ಮಾಡಿಕೊಳ್ಳುವವರೆಗೆ ಪುನಃ ಪುನಃ ಆ ಶಿಲ್ಪವನ್ನೇ ನೋಡಿದಳವಳು. ಆ ಶಿಲ್ಪಕಲಾ ಪ್ರದರ್ಶನದಲ್ಲಿ ಅಷ್ಟೊಂದು ಆಕರ್ಷಿಸಿದ ಶಿಲ್ಪ ಇನ್ನೊಂದಿಲ್ಲ. ಎಷ್ಟೋ ಶಿಲ್ಪಗಳನ್ನು ನೋಡಿದ್ದಿದೆ. ಆದರೆ ಇದರಷ್ಟು ಮನಃ ಕೆಡಿಸಿದ, ತೃಪ್ತಿ ನೀಡಿದ ಕಲಾಕೃತಿ ಇನ್ನೊಂದಿಲ್ಲ. ಅಮೃತ ಶಿಲೆಯಲ್ಲಿ ಕೆತ್ತಿದರೂ ಅದು ನಿಜವೋ ಎಂಬಂತೆ ಅದರಲ್ಲಿ ಭಾವನೆಗಳನ್ನು ತುಂಬಿದ್ದಾರೆ. ನಿಜಕ್ಕೂ ಅದರಲ್ಲಿ ಜೀವ ತುಂಬಿದವರನ್ನು ಮನಸಾರೆ ಅಭಿನಂದಿಸಿ, ಕಣ್ಣ್ಮುಚ್ಚಿ ಖರೀದಿಸಿ ಮನೆಗೆ ತಂದಳವಳು.

ನಡುಮನೆಯ ಕೊನೆಯಲ್ಲಿ ಇಟ್ಟ ಗಾಜಿನ ಟಿಪಾಯಿಯನ್ನಲಂಕರಿಸಿತು ಆ ಮೂರ್ತಿ. ಸೂರ್ಯ ತನ್ನ ಬೆಳಿಗ್ಗಿನ ಮೃದು ರಶ್ಮಿಯನ್ನು ಬಾಗಿಲ ಸಂಧಿಯಲ್ಲಿ ತೂರಿಸಿ, ಮಧ್ಯಾಹ್ನದ ಸುಡು ಬಿಸಿಲನ್ನು ಸೂರಿನ ಗಾಜಿನೊಳಗೆ ಹದವಾಗಿ ಹಾಯಿಸಿ, ಸಂಜೆಯ ಕೆಂಪುನ್ನು ಕಿಟಕಿಯಲ್ಲಿ ಕಳುಹಿಸಿ, ಆ ಮಂಗಳ ಮೂರ್ತಿಯನ್ನು ಸ್ಪರ್ಷಿಸುತ್ತಿದ್ದ. ರಾತ್ರಿಯ ಹಾಲು-ಬೆಳದಿಂಗಳ ನುಡುವೆಯೂ ಅದು ಎದ್ದು ಕಾಣುತ್ತಿತ್ತು. ಕೃತಕ ಬೆಳಕಿನ ವ್ಯವಸ್ಥೆ ಇದ್ದರೂ ನೈಜ ಬೆಳಕು ಆ ವಿಗೃಹದ ಮೇಲೆ ಬೀಳುವ ಹಾಗೆ ಇಟ್ಟಿದ್ದಳವಳು. ಆ ಮುಗ್ಧ, ದಿವ್ಯ, ವರ್ಣಿಸಲೇ ಕಷ್ಟವಾದ ರಾಧಾಕೃಷ್ಣ ಮೂರ್ತಿಯ ಎದುರು ಬಂದು ನಿಂತರೆ ಏನೋ ಒಂದು ಅವ್ಯಕ್ತವಾದ ಖುಷಿ ಅವಳಿಗೆ.

ದಿನವೂ ವೃಂದಾವನದಲ್ಲಿ ಎಲ್ಲರ ಕಣ್ತಪ್ಪಿಸಿ ಅವನಿಗಾಗಿ ಕಾಯುತ್ತಿದ್ದ ಅವಳ ಕಣ್ಣನ್ನು ಸದ್ದಿಲ್ಲದೆ ಬಂದು ಮುಚ್ಚುತ್ತಿದ್ದ. ಅವಳ ಹುಸಿ ಕೋಪವನ್ನು ತನ್ನ ಮುದ್ದು ಮುಖ ತೋರಿಸಿ ಓಡಿಸುತ್ತಿದ್ದ. ರಾಧೆ ತರುವ ಹಾಲನ್ನು ಕುಡಿಯಲು ಸತಾಯಿಸುತ್ತಿದ್ದ. ಕೋಲಾಟ ಆಡುವಾಗ ಬೇಕಂತಲೇ ತಪ್ಪು ಮಾಡಿ ಅವಳೇ ಕಲಿಸಲಿ ಅಂತ ಕಾಯುತ್ತಿದ್ದ. ತಪ್ಪಿಸಿ ಓಡುವ ಅವಳ ಜಡೆ ಹಿಡಿದು ಪಾರಿಜಾತ ಮುಡಿಸುತ್ತಿದ್ದ. ನಾಚಿ-ನೀರಾಗುವ ಅವಳ ಕಣ್ಣುಗಳನ್ನ ಹಾಗೆಯೇ ನಿಂತು ನೋಡುತ್ತಿದ್ದ. ತೊಡೆಯ ಮೇಲೆ ತಲೆಯಿರಿಸಿ, ತನ್ಮಯತೆಯಿಂದ ಕೊಳಲಗಾನ ಕೇಳುತ್ತಿದ್ದ ಅವಳ ಹಣೆಗೆ ಹೂಮುತ್ತಿಡುತ್ತಿದ್ದ. ಅವಳ ಮುಗ್ಧ ಬಟ್ಟಲು ಕಣ್ಣುಗಳಲ್ಲಿ ತನ್ನ ಪ್ರತಿಬಿಂಬ ಕಾಣುತ್ತಿದ್ದ.

ಅವಳೂ ಅಷ್ಟೆ, ಅಡಗಿ ಕುಳಿತು ಅವಳಿಗಾಗಿ ಹುಡುಕುವ ಕಣ್ಣುಗಳನ್ನು, ಸಿಗದಿದ್ದಾಗ ತೋರುವ ಅಸಹನೆಯನ್ನು ನೋಡಿ ಖುಷಿ ಪಡುತ್ತಿದ್ದಳು. ಹಾಲು, ಬೆಣ್ಣೆ-ಮೊಸರುಗಳನ್ನು ಅವನಿಗಾಗಿ ಮೀಸಲಿಡುತ್ತಿದ್ದಳು. ಅವುಗಳನ್ನು ತಿಂದು ಅವನು ಬೀರುವ ಒಂದು ಹೂನಗೆಗಾಗಿ ಕಾಯುತ್ತಿದ್ದಳು. ಅವನು ಬರುವ ದಾರಿಯಲ್ಲಿ ಹೂಹಾಸಿರುತ್ತಿದ್ದಳು. ಕೊಳಲ ಗಾನ ಕೇಳುತ್ತ ಅವನಲ್ಲಿ ಒಂದಾಗುತ್ತಿದ್ದಳು. ಅವನಿಗಿಷ್ಟವಾದ ಹೂಗಳನ್ನೇ ಆರಿಸಿ, ಹೂಮಾಲೆ ಕಟ್ಟಿ, ಅವನ ಕೊರಳಲ್ಲಿಟ್ಟು, ವಿಶಾಲ ವಕ್ಷದಲ್ಲಿ ತನ್ನನ್ನು ಹುದುಗಿಸುತ್ತಿದ್ದಳು. ಕೃಷ್ಣನ ಎದುರಲ್ಲಿ ಮಾತ್ರ ರಾಧೆ ಹೆಣ್ಣಾಗುತ್ತಿದ್ದಳು.

ರಾಧೆಯ ಕಣ್ಣುಗಳಲ್ಲಿ ಸೂಸುವ ಸಮರ್ಪಣೆ, ಕಷ್ಣನ ತುಂಟ ಕಣ್ಣುಗಳಲ್ಲಿ ಹೊಳೆಯುವ ಮಧುರ ಪ್ರೀತಿ ಬಹುಷಃ ಮತ್ತೆಲ್ಲು ನೋಡದಂತೆ ಅವಳನ್ನು ಆ ಪ್ರತಿಮೆಯ ಎದುರಿಗೆ ಕಟ್ಟಿಹಾಕಿದೆ.

ರಾಧೆ ಹಿಡಿದಿರುವ ಪ್ರತಿಯೊಂದು ಹೂವು ಹೇಳುತ್ತಿದೆ, "ರಾಧೆ ಕೃಷ್ಣನವಳು, ಕೃಷ್ಣ ರಾಧೆಯವನು" ಅಂತ. ಕದ್ದು ನೋಡುವ ಅವನ ಕಣ್ಣುಗಳಲ್ಲಿ ರಾಧೆಯೇ ಕಾಣುತ್ತಿದ್ದಳು. ಕೃಷ್ಣ ಆಡದ ಪ್ರತಿಯೊಂದು ಮಾತು ರಾಧೆಗಷ್ಟೇ ಕೇಳುತ್ತಿದೆ. ಅವನ ಮೌನದ ನೋಟದಲ್ಲೂ ಪ್ರೀತಿ ಉಕ್ಕುತ್ತಿದೆ. ಏನೂ ಹೇಳದೆ ಎಲ್ಲ ಅರ್ಥವಾಗಿದೆ!!!