Thursday, June 11, 2020

ಮಕ್ಕಳಾಟ



ಅವನು ಬೆಳಗ್ಗಿನ ಮೃದು ಬಿಸಿಲಿಗೆ ಮೈಯೊಡ್ಡಿ, ಕಾಫಿ ಹೀರುತ್ತಾ ಪೇಪರ್ ಮೇಲೆ ಕಣ್ಣಾಡಿಸುತ್ತಾ ಕುಳಿತ್ತಿದ್ದ. ಬೆಳಗ್ಗಿನ ಉಪಹಾರದ ಕೆಲಸ ಮುಗಿಸಿದ ಅವಳು, ಅಡುಗೆಮನೆಯಲ್ಲಿ ಪಾತ್ರೆಗಳ ಸದ್ದು ಮಾಡುತ್ತಾ ಮಧ್ಯಾಹ್ನದ ಊಟ ತಯಾರಿಯಲ್ಲಿ ಮಗ್ನಳಾಗಿದ್ದಳು. 

ಅವರ ಮಗಳು ತನ್ನಿಬ್ಬರು ಗೆಳತಿಯರೊಂದಿಗೆ ಇಸ್ಪಿಟ್ ಎಲೆಗಳಲ್ಲಿ ಡಾಂಕಿ(ಕತ್ತೆ) ಆಡುತ್ತಿದ್ದಳು. ಕರೋನಾ ಲಾಕ್‌ಡೌನ್ ಮಕ್ಕಳಿಗೆ ಎಲ್ಲವನ್ನು ಕಲಿಸಿ ಬಿಡುತ್ತದೆ. ಮಗಳು ೫ ವರ್ಷದವಳು ಮತ್ತು ಅವಳ ಗೆಳತಿಯರಿಬ್ಬರು ಅಕ್ಕ ತಂಗಿಯರು, ಅಕ್ಕ ೭ ವರ್ಷದವಳು, ತಂಗಿ ೩.೫ ವರ್ಷದವಳು. ಮಗಳು ಯಾವುದೇ ಕಾರಣಕ್ಕೆ ಸೋಲಾದರೆ ಸಿಟ್ಟು ಮಾಡಿಕೊಂಡು ಆಟವನ್ನೇ ನಿಲ್ಲಿಸಿ ಬಿಡುವಳು. ಅಕ್ಕ ಸೋತರೆ ತಂಗಿಯನ್ನು ಕರೆದುಕೊಂಡು ಮನೆಗೆ ಹೊರಟು ಬಿಡುವಳು. ತಂಗಿಗೆ ಡಾಂಕಿ ಆಟ ಹೊಸದು. ಇವರಿಬ್ಬರು ಸೇರಿ ಅವಳಿಗೆ ಆ ಆಟವನ್ನು ಹೇಳಿಕೊಟ್ಟರು. ಆಟ ಶುರುವಾಯಿತು. ಸೋಲಲು ತಯಾರಿಲ್ಲದ ಇವರಿಬ್ಬರು ಸೇರಿ ತಂಗಿಯನ್ನು ಡಾಂಕಿ ಮಾಡಿದರು. ಕೊನೆಯಲ್ಲಿ ತಂಗಿ ಅಕ್ಕನ ಹತ್ತಿರ ಬಂದು "ಡಾಂಕಿ" ಆದರೆ ಏನು ಅಂತ ಕೇಳಿದಳು. ಅಕ್ಕ ಡಾಂಕಿ ಆದವರು ವಿನ್ ಅಂದಳು. ತಂಗಿಗೆ ವಿನ್ ಅಂದರೆ ಗೆಲುವು ಅಂತ ಗೊತ್ತಿತ್ತು. ಅಕ್ಕ ಹಾಗಂದದ್ದು ಕೇಳಿ ತಂಗಿ ಖುಷಿ ಪಟ್ಟಳು. ಇವರಿಬ್ಬರು ಗೆದ್ದುದಕ್ಕೋ ಅಥವಾ ತಂಗಿಯನ್ನು ಮೂರ್ಖಳನ್ನಾಗಿಸಿದುದಕ್ಕೋ ಖುಷಿ ಪಟ್ಟರು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವನು ಅಡುಗೆ ಮನೆ ಹೊಕ್ಕು ಅವಳನ್ನು ಪ್ರಶ್ನಿಸಿದ. ಸೋಲು ಎಲ್ಲಿದೆ ? ಅದಕ್ಕವಳು ಇದೆಂಥ ಪ್ರಶ್ನೆ !!! ಸೋಲು ಎಂದರೇನು ಅಂತ ಕೇಳುವುದು ಬಿಟ್ಟು ಎಲ್ಲಿದೆ ಅಂದರೆ... ಹುಬ್ಬೇರಿಸಿ ಪ್ರಶ್ನಿಸಿದಳು. ಅವನು ನಗುತ್ತ ತಲೆಯತ್ತ ಬೆರಳು ಮಾಡಿ, ಇಲ್ಲಿದೆ ಅಂದ. ಅರ್ಥ ಆಗಲಿಲ್ಲ ಅಂತ ತಲೆಯಾಡಿಸಿದಳವಳು. ಆಗ ಅವನು ಹೂಂ .. ಸೋಲು ಗೆಲುವುಗಳು ನಮ್ಮ ಮನಸ್ಸಿನಲ್ಲಿದೆ. ಮಕ್ಕಳ ಕಡೆ ಬೆರಳು ಮಾಡಿ, ತಾನು ಅಲ್ಲಿಯ ತನಕ ನೋಡಿದ್ದನ್ನು ಅವಳಿಗೆ ವಿವರಿಸಿದ. ಆಗ ಅವಳು, ದೊಡ್ಡ ಮಕ್ಕರಿಬ್ಬರು ಸೇರಿ ಪಾಪ ತಂಗಿಗೆ ಸೋಲುವಂತೆ ಮಾಡಿ ಮೋಸ ಮಾಡಿದರು ಅಂತ ಬೇಜಾರು ಮಾಡಿಕೊಂಡಳು.

ಅವನು ಮುಂದುವರೆಸಿದ..
ಸೋಲಿನ ಅರಿವೇ ಇಲ್ಲದ ಸೋಲು ಸೋಲಾ?
ಸೋತವರಿಗೆ ಸೋತೆನೆಂಬ ಭಾವವೇ ಬಾರಿಸದ ಗೆಲುವು ಗೆಲುವಾ?
ಅಥವಾ
ಸೋಲನ್ನೇ ಗೆಲುವು ಅಂದು ಕೊಂಡವರ ಗೆಲುವು ಗೆಲುವಾ?
ನಮಗೇನು ಬೇಕು ?
ಸೋಲಾ ?
ಗೆಲುವಾ ?
ಅಥವಾ ಅದರಾಚೆಗಿನ ಮನಸ್ಥಿತಿಯಾ(ಭಾವವಾ)?

ಇಲ್ಲಿ ಎಲ್ಲವು ಒಂದೇ. ಬರಿ ಮಕ್ಕಳಾಟ. ಮನಸ್ಸು ಮಕ್ಕಳಂತಿದ್ದರೆ ಬದುಕೆಷ್ಟು ಖುಷಿ ಆಗುತ್ತದಲ್ಲವಾ?
ಅವಳು ಹೌದೆಂಬಂತೆ ನಕ್ಕಳು.
ಅವನು ಅವಳ ಗುಳಿ ಬಿದ್ದ ಕೆನ್ನೆ ನೋಡುತ್ತಾ ಹೊರನೆಡೆದ.

ಮಕ್ಕಳೆಲ್ಲರೂ ಖುಷಿಯಾಗಿದ್ದರು. ಆಟ ಮುಂದುವರೆಯಿತು.

--ಸು




0 Comments:

Post a Comment

<< Home