ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||
ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||
ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||
ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||
ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||
ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||
ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||
ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||
ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||
0 Comments:
Post a Comment
<< Home