Friday, June 15, 2018

ಎಳೆಯರ ರಾಮಾಯಣ

ಪೂರ್ವಂ ರಾಮಂ  ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ ।।

ವೈದೇಹಿ ಹರಣಂ ಜಟಾಯು ಮರಣಂ 
ಸುಗ್ರೀವ ಸಂಭಾಷಣಂ ।।

ವಾಲಿ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರಿ ದಹನಂ ।।

ಪಶ್ಚಾತ್ ರಾವಣ ಕುಂಭಕರ್ಣಾದಿ ಮರ್ಧನಂ  (ಹರಣಂ)
ಏತದ್ದಿತಿ ರಾಮಾಯಣಂ ।।

------------------------------------------------------------------

ಕಾಶಿ ದ್ವಾರಕೆ
 ಕುಂಭಕೋಣ ಮಧುರೆ 
ಕೇದಾರ ರಾಮೇಶ್ವರ 
ಪಂಪಾಕ್ಷೇತ್ರೇ ಅವೋವಳ 
ಶ್ರೀಮಷ್ಠಿ  ಮಧ್ಯಾರ್ಜುನ 
ಏವಂ ಪುಣ್ಯ ಸಹಸ್ರ ಕೋಟಿ ಅಧಿಕಂ
 ಓಂಕಾರ ನಾರಾಯಣಂ 

------------------------------------------------------------------

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||
ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||
ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||
ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||

Thursday, June 14, 2018

ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ



ರಾಗ: ಕಲ್ಯಾಣಿ-ಆದಿತಾಳ

ಶರಣೆಂಬೆ ವಾಣಿ-ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರಬ್ರಹ್ಮಾಣಿ | ಸುಂದರವೇಣಿ-ಸುಚರಿತ್ರಾಣಿ ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ ||೧||

ಪಾಡುವೆ ಶ್ರುತಿಯ- ಬೇಡುವೆ ಮತಿಯ ಪುರಂದರ
ವಿಠಲನ ಹಿರಿಯ (ಸೋದರ) ಸೊಸೆಯ ||೨||

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ



ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೆ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳ್ ಈಪರಿ ರೂಪವುಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||

ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||

ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||


ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||

ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||

ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||

ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||

ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||

ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||

ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||

ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||

ರಾಮ ಮಂತ್ರವ ಜಪಿಸೋ



ರಾಮ ಮಂತ್ರವ ಜಪಿಸೋ – ರಾಗ : ಮಧ್ಯಮವತಿ. ಆದಿ ತಾಳ. ಪುರಂದರದಾಸರು


ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ರಾಮ|

ಕುಲಹೀನನಾದರು ಕೂಗಿ ಜಪಿಸೋ ಮಂತ್ರ
ಸಲೆಬೀದಿಯೊಳು ಉಚ್ಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊoಬುವ ಮಂತ್ರ || ರಾಮ|

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ರಿಶಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ರಾಮ|

ಜ್ಞಾನನಿಧಿ ನಮ್ಮ ಆನ೦ದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನು ಕುಲಾ೦ಬುಧಿ ಸೋಮನೆನಿಪ ನಮ್ಮ
ದೀನ ರಕ್ಷಕ ಪುರಂದರವಿಠಲನ ಮಂತ್ರ || ರಾಮ|