Friday, August 17, 2007

ಕಲಾ ಸಂಸ್ಕಾರ

"ಗೋಖಲೆ ವಿಚಾರ ಸಂಕೀರ್ಣ" (ಬಸವನಗುಡಿ ರಸ್ತೆ)... ಇಲ್ಲಿ ಯಾವಾಗಲೂ ಎನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಸಂಜೆ ೬.೩೦ ಕ್ಕೆ ಪ್ರಾರಂಭವಾದರೆ ಮುಗಿಯುವುವಾಗ ಸಾಧಾರಣ ೭.೩೦ - ೮.೦೦. ಹೆಚ್ಚು ಅಂದರೆ ೮.೩೦ ಎಲ್ಲ ಕಾರ್ಯಕ್ರಮಗಳಿಗೆ ಮಂಗಳ ಮುಗಿದಿರುತ್ತದೆ. ಆಫೀಸಿನಿಂದ ಬರುವಾಗಲೇ ೭.೩೦ ಆಗುವುದರಿಂದ ವಾರದ ಕಾರ್ಯಕ್ರಮಗಳಿಗೆ ನಾನು ಗೈರು ಹಾಜರಾಗಿರುತ್ತೇನೆ. ಆದರೆ ವಾರಂತ್ಯದಲ್ಲಿರುವ ಒಳ್ಳೆಯ ಕಾರ್ಯಕ್ರಮಗಳಿಗೆ ಭೇಟಿ ಕೊಡುತ್ತೇನೆ.


"ಏಕವ್ಯಕ್ತಿ ಯಕ್ಷಗಾನ ಪ್ರಾತ್ಯಕ್ಷಿಕೆ" - ಪ್ರಭಾಕರ ಉಪಾಧ್ಯ, ಶತಾವಧಾನಿ ಡಾ||ಗಣೇಶ ಮತ್ತು ತಂಡದವರಿಂದ. (೨/೦೬/೦೭ ರಿಂದ ೭/೦೬/೦೭ರ ವರೆಗೆ). ಮೊದಲ ದಿನ ತಪ್ಪಿ ಹೋದದ್ದರಿಂದ ಎರಡನೆಯ ದಿನ ತಪ್ಪಿಸಿಕೊಳ್ಳದೆ ಭಾಗಿಯಾದೆ. "ಭಾಮಿನಿ" - ವಿವಿಧ ಶೃಂಗಾರ ರಸದಿಂದ ಕೂಡಿದ ಹಾಡಿಗೆ ಉಪಾಧ್ಯರು ತುಂಬಾ ಚೆನ್ನಾಗಿ ಕುಣಿದರು. ಮೊದಲ ಬಾರಿಗೆ ಶಿವರಾಮ ಕಾರಂತರ ನವೋದಯ ಯಕ್ಷಗಾನದ ಶೈಲಿಯನ್ನು ಪ್ರತ್ಯಕ್ಷವಾಗಿ ಕಾಣುವ ಭಾಗ್ಯ ನನ್ನದು. ಯಕ್ಷಗಾನಕ್ಕೆ ವಯೋಲಿನ್ ಅಳವಡಿಸಿ, ಹಾವ-ಭಾವ, ಭಂಗಿಗಳನ್ನು ಸ್ವಲ್ಪ ಭರತನಾಟ್ಯದಿಂದ ಅನುಕರಿಸಿ ಪ್ರಸ್ತುತ ಪಡಿಸಿದ್ದರು. ವೀರಾವೇಶದ ಯಾವ ಪದಗಳು ಅಷ್ಟಾಗಿ ಇರಲ್ಲಿಲ್ಲ. ಸಾಂಪ್ರದಾಯಿಕ ಯಕ್ಷಗಾನ ನೋಡಿದ್ದ ನನಗೆ ಇದು ಸ್ವಲ್ಪ ಭಿನ್ನ ಅನಿಸಿತು. ಶೃಂಗಾರ ರಸ ಪ್ರದರ್ಶಿಸಿದರೂ ಭಾಗವತರ ಹಾಡಿನಲ್ಲಿ ದೇಹದ ಯಾವ ಅಂಗಗಳ ವರ್ಣನೆ ಇರಲ್ಲಿಲ್ಲ. ಶತಾವಧಾನಿಗಳ ಪ್ರಕಾರ, ಈ ಶೃಂಗಾರ ರಸ ಅಲೌಕಿಕವಾದದ್ದು. ಲೌಕಿಕವಲ್ಲ, ಭೌತಿಕವಲ್ಲ. ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ಹೇಳುವ "ಭಾಮಿನಿ-ಅಭಿಸಾರಿಕೆ"ಯನ್ನು ಅವರು ವಿಶ್ಲೇಷಿಸಿದ ರೀತಿ ಅಮೋಘವಾದದ್ದು. ಈ ಶೃಂಗಾರ ರಸವನ್ನು ಯಾರು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು. ಅದು ಅವರವರ ಮನಃ-ಸಂಸ್ಕಾರಕ್ಕೆ ಬಿಟ್ಟದ್ದು ಎಂದರು. ನಿಜವಾಗಲೂ ಉಪಾಧ್ಯಾಯರ ಕುಣಿತ, ಶತಾವಧಾನಿಗಳ ವಿಶ್ಲೇಷಣೆ ಎರಡೂ ಅವರ್ಣನೀಯ.

ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಹೆಣ್ಣು ತನ್ನ ಗಂಡನ ಬರವನ್ನು ನಿರೀಕ್ಷಿಸುವ ಬಗೆಯನ್ನು ಅವನಿಗಾಗಿ ಹಾತೊರೆಯುವ, ಪರಿತಪಿಸುವ, ಆಕ್ಷೇಪಿಸುವ, ರೀತಿಯನ್ನು ಪದ್ಯ-ನೃತ್ಯಗಳೆರಡರಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಪ್ರಕೃತಿಯ ಬದಲಾವಣೆಯ ಜೊತೆ ಜೊತೆಗೆ ಭಾಮಿನಿಯ ಮನಃಸ್ಥಿತಿಯ ಬದಲಾವಣೆಗಳನ್ನು ಹಳದಿ, ಹಸಿರು, ಕಡು ನೀಲಿ , ಬಿಳಿ ಬಣ್ಣದ ವೇಷ-ಭೂಷಣಗಳಲ್ಲಿ ಬಿಂಬಿಸಿದ್ದಾರೆ. ಅರುಣರಾಗದೊಂದಿಗೆ ಶುರುವಾದ ಗೀತೆ, ಮರುದಿನದ ಅರುಣರಾಗದೊಂದಿಗೆ ಕೊನೆಗೊಳ್ಳುತ್ತದೆ.






ಮಾರನೇ ದಿನ ಮಣಿಪುರದ ಮಾನಿನಿ (ಪೂತನಿ ಸಂಹಾರ)- ಇಲ್ಲಿ ಪೂತನಿಯ ರಾಕ್ಷಸೀ ಸ್ವಭಾವ ಮತ್ತು ಶ್ರೀಕೃಷ್ಣನ ಮೇಲಿನ ಭಕ್ತಿಯ ಮೂಲಕ ಅವಳ ಮನಸ್ಸಿನ ದ್ವಂದ್ವವನ್ನು ಪ್ರಕಟಿಸಿದರೆ, ಯಕ್ಷನವೋದಯ - ಡಿವಿಜಿಯ "ಅಂತಃಪುರ ಗೀತೆಗಳು", ಪುತಿನ{?}ರ "ಪತಿಕ" ಇವುಗಳ ಮೂಲಕ ರಸಿಕತೆಯನ್ನು ತೋರಿಸಿದರು. ಕೆ.ಸ್.ನರಸಿಂಹ ಸ್ವಾಮಿಯವರ "ಹತ್ತುವರುಷದ ಹಿಂದೆ..." ಮೂಲಕ "ನೀನನಗೆ-ನಾನಿನಗೆ"(ಪು.ತಿ.ನ), "ಸಖಾ ಸಪ್ತಶತಿಃ"(ಭವಭೂತಿ) - ಏಳು ಹೆಜ್ಜೆಯಲ್ಲಿ ಕೊನೆಯ ಹೆಜ್ಜೆ, ಸ್ನೇಹದ ಹೆಜ್ಜೆ ಅಂತ ಉದಾಹರಣೆ ಕೊಡುತ್ತ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಅಂದರೆ ಏನು ಅಂತ ವಿವರಿಸಿದರು. ಕುವೆಂಪು ಅವರ "ವೃಂದಾವನದೊಳು ಹಾಲನು ಮಾರಲು..." ಮೂಲಕ ರಾಧೆಯ ಶೃಂಗಾರ ಮತ್ತು ಆತ್ಮಸಮರ್ಪಣೆಯ ಜೊತೆಗೆ ಅಧ್ಯಾತ್ಮವನ್ನು ತೋರಿಸಿದರು.


ಮತ್ತೊಂದು ದಿನ ಪ್ರಣಯವಂಚಿತೆ ಅಂಬೆಯನ್ನು ಪ್ರಪ್ರಥಮ ಭಾರಿ ರಂಗಮಂಚದಲ್ಲಿ ಪ್ರದರ್ಶಿಸಿದರು. ಇಲ್ಲಿ ಕೂಡ ರಸಿಕತೆಯಿಂದ ಪ್ರಾರಂಭಿಸಿ ಅಂಬೆಯ ಜೀವನವನ್ನು, ಪ್ರಣಯ ವಂಚಿತಳಾದುದನ್ನು, ವರಪಡೆದು ಭೀಷ್ಮನ ಮರಣಕ್ಕೆ ಕಾರಣವಾಗಿ, ಕೊನೆಗೂ ಜೀವಂತ ದಹನವಾಗುವುದನ್ನು ಮಾರ್ಮಿಕವಾಗಿ ತೋರಿಸಿದ್ದಾರೆ.

ಶತಾವಧಾನಿಗಳು ಆಯ್ದುಕೊಂಡಿರುವ ಎಲ್ಲ ಗೀತೆಗಳನ್ನು ಲೌಕಿಕದಲ್ಲಿ ಮೊದಲುಗೊಂಡು, ಅಧ್ಯಾತ್ಮದಲ್ಲಿ ಕೊನೆಗೊಳ್ಳುವಂತೆ ಮಾಡಿ ಎಲ್ಲ ಕಲಾರಸಿಕರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿದ್ದಾರೆ. ಕೊನೆಯ ದಿನದ "ಪ್ರಣಯ ವಂಚಿತೆ"ಯ ದಹನದಿಂದ ಉರಿಗೊಂಡ ಮನಸ್ಸನ್ನು ತಣಿಸಲು ಎಲ್ಲ ಕಲಾ ಬಾಂಧವರಿಗೆ ಮಂಟಪ ಐಸ್-ಕ್ರೀಂ ಹಂಚಿದರು.

ಶತಾವಧಾನಿಗಳ ಸಂಯೋಜನೆ-ನಿರೂಪಣೆ, ಉಪಾಧ್ಯರ ಅಮೋಘ ನೃತ್ಯ ಶೈಲಿ, ಕವಿತೆಗಳ ಆಯ್ಕೆ, ಶೃಂಗಾರವನ್ನು ಎಲ್ಲೂ ಕಲಾಮರ್ಯಾದೆ ಮೀರದಂತೆ ಮಂಡಿಸುವುದು ಎಲ್ಲವೂ ಅವರ ಕಲಾಸಂಸ್ಕಾರವನ್ನು ಎತ್ತಿ ಹಿಡಿದಿವೆ. ಹೀಗೊಂದು ವಾರಾಂತ್ಯ ಕಳೆದ ನನ್ನ ಮನಸ್ಸು ಕೂಡಾ ಸಂತೃಪ್ತಿಗೊಂಡಿತು. ಶತಾವಧಾನಿಗಳು ನನ್ನ ಕ್ಯಾಮರಕ್ಕೆ ನಿಂತಭಂಗಿ ಹೀಗಿದೆ...

"ವಿದ್ಯಾಂ ವಿನಯಂ ದಧಾತಿ" - ಶತಾವಧಾನಿಗಳಂಥವರನ್ನು ನೋಡಿಯೇ ಹೇಳಿರಬೇಕು.

8 Comments:

Blogger Jagali bhaagavata said...

ಚೆನ್ನಾಗಿದೆ ಬರಹ. ಏಕವ್ಯಕ್ತಿ ಪ್ರದರ್ಶನ ಇನ್ನೂ ನೋಡಿಲ್ಲ ನಾನು. ಫೋಟೊ ಚೆನ್ನಾಗಿವೆ.

ಉಪಾಧ್ಯಾಯ ಅಥ್ವ ಉಪಾಧ್ಯ? ಎರಡೂ ಬೇರೆ ಬೇರೆ ಅಲ್ವಾ? ಉಪಾಧ್ಯ ಸರಿ ಅನ್ಸತ್ತೆ.

8/20/2007 6:20 PM  
Blogger Supreeth.K.S said...

ಈ ತಿಂಗಳ ರಜೆಯಲ್ಲಿ ಗೆಳೆಯನ ಊರಾದ ಸಾಗರಕ್ಕೆ ಹೋಗಿದ್ದಾಗ ಅಲ್ಲಿ ಉಪಾಧ್ಯರ ಏಕವ್ಯಕ್ತಿ ಪೆಅದರ್ಶನ ಸಪ್ತಾಹ ನಡೆಯುತ್ತಿತ್ತು. ಒಂದು ಪ್ರದರ್ಶನವನ್ನು ಮಾತ್ರ ನೋಡಲು ಸಾಧ್ಯವಾಯಿತು. ಉಪಾಧ್ಯರ ಭಾವಪೂರ್ಣವಾದ ಅಭಿನಯ, ಅಭಿನಯದಲ್ಲಿನ ಸೂಕ್ಷ್ಮತೆ, ಮಗ್ನತೆ ಮನಸೂರೆಗೊಂಡಿತ್ತು. ಗಣೇಶರ ಅಸ್ಖಲಿತವಾದ ಸಾಹಿತ್ಯ ಮೆಚ್ಚಿಕೊಂಡಿದ್ದೆ.

8/20/2007 6:31 PM  
Blogger Gubbacchi said...

ಸೋಮಯಾಜಿ, ಉಪಾಧ್ಯಾಯ ಎಲ್ಲ ವೃತ್ತಿಯಿಂದ ಬಂದದ್ದಲ್ದಾ? ನನ್ನ ಅಣ್ಣನು ಉಪಾಧ್ಯಾಯ ಅಂತ ಬರಿದಪ. ನಂಗೆ ವ್ಯತ್ಯಾಸ ಗೊತ್ತಿಲ್ಲ...ನೀವೆ ಹೇಳಿಕಾಂಬ

8/22/2007 5:23 AM  
Blogger Jagali bhaagavata said...

I am no Pandit. But I have seen his name as 'Upadhya'. I guess it comes from the word 'upaadhi'.

8/23/2007 7:23 PM  
Blogger Gubbacchi said...

ಭಾಗ್ವತ್ರೆ, ನೀವ್ ಹೇಳ್ದಂಗೆ ಉಪಾಧ್ಯಯರನ್ನು ಉಪಾಧ್ಯ ಮಾಡ್ದೆ ಕಾಣಿ. ಈಗ ಸರಿ ಆಯ್ತಾ?

8/23/2007 9:30 PM  
Blogger Jagali bhaagavata said...

ಸರಿಯಾಯ್ತ್:-))

8/25/2007 9:44 PM  
Blogger Pramod P T said...

ನಾನು "ಏಕವ್ಯಕ್ತಿ ಪ್ರದರ್ಶನ" ಕ್ಕೆ ಹೋಗಿದ್ದೆ. ತುಂಬಾ ಚೆನ್ನಾಗಿತ್ತು. ಹಾಗೆ ನಿಮ್ಮ ಬರಹ ಕೂಡ!

2/20/2008 4:03 AM  
Anonymous Anonymous said...

Very good!

1/06/2009 4:38 AM  

Post a Comment

<< Home