Tuesday, June 26, 2007

ಒಡೆದ ಕನ್ನಡಿಯಿಂದ....

ಈ ಕಾಲವೇ ಹೀಗೆ!!!...ಯಾವುದನ್ನೂ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಇಡೀ ವಾತವರಣದಲ್ಲೇ ಗೊಂದಲ. ಯಾವಾಗ ಜೋರಾಗಿ ಮಳೆ ಹೊಯ್ಯುವುದೋ, ಯಾವಾಗ ಬಿಸಿಲ ಝರಿ ಝಳಪಿಸುವುದೋ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಯಾವುದೂ ಯಾರ ನಿಯಂತ್ರಣದಲ್ಲಿ ಇರಲಿಲ್ಲ.
ಅವನು ಆಗ ತಾನೇ ಕಲಿಯಲಿಕ್ಕೆ ಅಂತ ಹೋದ ಸ್ಠಳದಿಂದ ವಾಪಾಸು ಬಂದಿದ್ದ. ಎಲ್ಲವೂ ಅವ್ಯವಸ್ಥಿತವಾಗಿ ತೋರುತಿತ್ತು. ಎಂಥದೋ ಅಸಹನೆ, ಹೇಳಿಕೊಳ್ಳಲಾಗದ ಮನಸ್ಥಿತಿ. ತುಂಬಾ ಸಮಯದ ಮನಸ್ಸಿನ ಹೊಯ್ದಾಟ, ಒಂದು ನಿರ್ಧಾರಕ್ಕೆ ಬಂದು ಶಾಂತವಾಯಿತು. ಆ ನಿರ್ಧಾರ, ಭೂಮಿಯ ಜೊತೆಗಿನ ಸಂಬಂಧ ಕಿತ್ತೊಗೆಯುವ, ಎಲ್ಲ ನೊವು-ನಲಿವುಗಳಿಂದ ಮುಕ್ತಿ ಪಡೆಯುವ, ಚಿರ-ನಿದ್ದೆಯಲ್ಲಿ ಮುಳುಗಿ ಶಾಂತವಾಗುವ ನಿರ್ಧಾರ!!!! ಯಾವುದೇ ಕಾರಣಕ್ಕೂ ಈ ನಿರ್ಧಾರ ಅಲುಗಾಡಬಾರದೆಂಬ ದೃಢತೆಯನ್ನು ಚಂಚಲ ಮನಸ್ಸಿಗೆ ತಿಳಿಹೇಳುತ್ತಿದ್ದ.
ಯಾವಾಗಲೂ ಅವನು ಈ ಜಗತ್ತಿನ ಬಗ್ಗೆ ಯೋಚಿಸುತ್ತಿದ್ದ. ಎಲ್ಲ ಜನರು ಅನುಭವಿಸುತ್ತಿರುವ ನೋವು, ಮನಸ್ಸನ್ನೂ ಕೂಡ ದುರ್ಬಲ ಮಾಡುವ ಶಕ್ತಿಯುಳ್ಳ ಈ ನೋವು, ಇದಕ್ಕೊಂದು ಪರಿಹಾರ ಕಂಡು ಹಿಡಿಯಲೇ ಬೇಕೆಂದು ಅವನು ಅದಕ್ಕೆ ಸಂಬಂಧಪಟ್ಟ ಅಭ್ಯಾಸದಲ್ಲಿ ತೊಡಗಿದ್ದ. ಕೆಲವರಿಗಾದರೂ ಸಹಾಯ ಮಾಡಬೇಕೆಂಬ ಉತ್ಕಟ ಬಯಕೆ. ಯಾವಾಗ ಈ ನೋವು ಇವನ್ನನ್ನೇ ದಹಿಸಿತೊ ಅವನ ಕ್ರಿಯಾಶೀಲ ಮನಸ್ಸು ತನ್ನ ಹಿಡಿತ ಕಳೆದುಕೊಂಡಿತು. ಎಲ್ಲ ಆಸಕ್ತಿಗಳು ಮೊಳಕೆಯಲ್ಲಿಯೇ ಬಾಡಿ ಹೋದವು. ಆದರೂ ಆ ದಿನದ ನಿರ್ಧಾರ ಮಾತ್ರ ಅಚಲ ಎಂಬ ನಂಬಿಕೆ ದಿನೇ ದಿನೇ ದೃಢಗೊಳ್ಳುತ್ತಿತ್ತು.
ನಿರ್ಧಾರದ ದಾರಿಯ ಆಯ್ಕೆ ಮಾತ್ರ ಗಾಳಿ ಬಂದ ದಿಕ್ಕಿನ ಜೊತೆ ಬದಲಾಗುತ್ತಿತ್ತು. ಯಾವ ಹಾದಿ ಯಾರ ಗಮನವನ್ನು ಸೆಳೆಯದೆ ಕೊನೆ ತಲುಪುವಲ್ಲಿ ಸಹಾಯ ಮಡಬಹುದೆಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿದ್ದ. ಒಂದು ಮಾತ್ರ ಎಲ್ಲರ ಗಮನ ಕಡಿಮೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಅದರ ನೀಲ-ನಕಾಶೆಯ ಚಿತ್ರಣ ತಯಾರಾಗತೊಡಗಿತು. ದಿನಗಳು ಹತ್ತಿರವಾಗುತ್ತಿದ್ದವು. ಕೊನೆಗೂ ನಿರ್ಧರಿತ ದಿನ ಬಂದಿತು. ಸೂರ್ಯ ಪಶ್ಚಿಮದ ಕಡೆ ಮುಖ ಮಾಡಿದ್ದ. ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳು ಸಿದ್ಧವಾಗಿದ್ದವು. ಚಿರಶಾಂತಿಯ ಜಾಗ ಯಾರೂ ಇಲ್ಲದೆ ಪ್ರಶಾಂತವಾಗಿತ್ತು. ಒಂದೊಂದೇ ಅಸ್ತ್ರ ದೇಹ ಪ್ರವೇಶಿಸಿದಾಗ, ವಿಜಯ ತನ್ನದೇ ಎನ್ನುವ ಉತ್ಸಾಹ ಹೆಚ್ಚಾಗುತ್ತಿತ್ತು.
ಅಂಗಾತವಾಗಿ ಮಲಗಿರುವ ಆತನಿಗೆ ಶುಭ್ರ ನೀಲಾಕಾಶ ಸ್ಪಷ್ಟವಾಗಿ ಕಂಡಿತು. ಮನಸ್ಸು ಸದ್ದಿಲ್ಲದೆ ಬಾಲ್ಯಕ್ಕೆ ಹಾರಿತು. ಬಾಲ್ಯದಲ್ಲಿ ನೀಲಾಕಾಶವನ್ನು ತುಂಬು ಹೃದಯದಿಂದ ನೋಡುತ್ತಿದ್ದ. ಆಕಾಶವೇ ರಂಗ ಮಂದಿರದಂತೆ... ಅಲ್ಲಿ ಬಾಲ್ಯದ ಪ್ರತಿ ದೃಶ್ಯಗಳು ಹಾದು ಹೋಗುತ್ತಿದ್ದವು. ಅಕ್ಕ, ನಾನು, ಅವಳು ಶಾಲೆಗೆ ಒಟ್ಟಿಗೆ ಹೋಗಿ ಬರುತ್ತಿದ್ದೆವು. ನಾನು, ಅವಳು ಒಂದೇ ತರಗತಿ. ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುತ್ತಿದ್ದೆವು. ನಾವು ಅಣ್ಣ-ತಂಗಿಯರಂತೆ ಬೆಳೆದರೂ, ಶಾಲೆಯಲ್ಲಿ ಒಬ್ಬರಿಗೊಬ್ಬರು ಮಾತು-ಕತೆಯಿಲ್ಲ. ಶಾಲೆಗೆ ಹೋಗುವಾಗ-ಬರುವಾಗ ಚರ್ಚಿಸದ ವಿಷಯವೇ ಇಲ್ಲ. ಜಗಳ ಕೆಲವೊಮ್ಮೆ ೧-೨ ದಿನಗಳ ಮೌನದೊಂದಿಗೆ ಕೊನೆಗೊಳ್ಳುವುದು ರೂಢಿ. ಅವಳು ಮಾತನಾಡದೆ ಮೌನವಾಗಿರುವುದು ತುಂಬಾ ಕಡಿಮೆ. ಅಕ್ಕನಿಗೋಸ್ಕರ ನಾವಿಬ್ಬರು ಶನಿವಾರ ಕಾದು ನಿಂತಿರುತ್ತಿದ್ದೆವು. ಅಕ್ಕ ತೆಗಿಸಿ ಕೊಡುವ ಮಿಠಾಯಿ, ಐಸ್-ಕ್ಯಾಂಡಿ, ಪೇರಳೆ, ಹಣೆ-ಕಣ್ಣು, ಕಡಲೆ, ಬಟಾಣಿಗಳಿಗಾಗಿ. ಮಳೆರಾಯನ ಅಬ್ಬರವನ್ನು ಓಲೆ ಕೊಡೆ ಹಿಡಿದು ತಡೆಯುತ್ತಿದ್ದ ರೀತಿ, ಕೆಸುವಿನ ಎಲೆಯ ಮಧ್ಯೆ ಕಲ್ಲಿಟ್ಟು ನೀರಿನಲ್ಲಿ ಬಿಟ್ಟು ಅದರ ಹಿಂದೆ ಓಡುತ್ತಿದ್ದ ನಾವು, ದುಂಬಿಯ ರೆಕ್ಕೆಗೆ ಹೂಕಟ್ಟಿ ಅದನ್ನು ಹಿಂಬಾಲಿಸುತ್ತಿದ್ದ ನಾವುಗಳು, ಟೀಚರ್ ಕೊಟ್ಟ ಖರ್ಜೂರವನ್ನು ಇಬ್ಬರೇ ಮುಗಿಸಿ ಅಮ್ಮನಿಂದ ಬೈಸಿಕೊಂಡ ನಾವುಗಳು, ಅವಳ ಚೀಲಕ್ಕೆ ಒಂದೊಂದೇ ಕಲ್ಲು ಹಾಕಿ, ಮೌನವಾಗಿ ಹಿಂಬಾಲಿಸಿ, ಅವಳು ಪುಸ್ತಕ ಹೊರತೆಗೆಯುವಾಗ ಸಿಗುವ ಕಲ್ಲುಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದ ಅವಳನ್ನು ನೋಡುವಾಗ ನನಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದೆ. ನಾವು ಬಂಜೆ ತೆಂಗಿನ ಕಾಯಿ ಕಟ್ಟಿಕೊಂಡೋ, ಬಾಳೆ ದಿಮ್ಮಿ ಇಟ್ಟುಕೊಂಡೋ ಈಜು ಕಲಿತ್ತದ್ದು, ಹತ್ತು ಸಲ ಬಿದ್ದು ಸೈಕಲ್ ಬಿಟ್ಟದ್ದು, ನೀಲಾಕಾಶದಲ್ಲಿ ಮೇಷ, ವೃಷಭ, ಕನ್ಯಾ ಇತ್ಯಾದಿ ರಾಶಿ ಗುರುತಿಸಿದ್ದು, ಧ್ರುವ, ಅರುಂಧತಿ ನಕ್ಷತ್ರಗಳನ್ನು ಅವಳಿಗಿಂತ ಮೊದಲು ನಾನೇ ಗುರುತಿಸಿ ಹೆಮ್ಮಯಿಂದ ಬೀಗಿದ್ದು.... ಹೀಗೆ ಒಂದೇ - ಎರಡೇ.... ದಿನವೂ ನಾವು ಒಂದಲ್ಲ ಒಂದು ವಿಚಾರ ಚರ್ಚಿಸಿ ಬರುತ್ತಿದ್ದ ರೀತಿ ಎಷ್ಟು ಖುಷಿ ಕೊಡುತ್ತಿತ್ತು. ನಾನು ಓದಿದ ಹೊಸ ಪುಸ್ತಕದ ವಿವರಣೆ ಅವಳ ಮುಂದೆ ಇರುತ್ತಿತ್ತು. ಅವಳು ನನ್ನೊಂದಿಗೆ ಚರ್ಚೆಗೆ ಇಳಿಯುತ್ತಿದ್ದಳು. ಮತ್ತೆ ನಾವು ಬೇರೆ ಮನೆಗೆ ಬಂದದ್ದು.. ಪರೀಕ್ಷೆಯ ಸಮಯದಲ್ಲಿ ಇಬ್ಬರು ಒಟ್ಟಿಗೆ ಓದಿದ್ದು.... ನಂತರ ನಾವಿಬ್ಬರೂ ಬೇರೆ ಬೇರೆ ಅಭ್ಯಾಸದಲ್ಲಿ ತೊಡಗಿದ್ದು... ಎಲ್ಲ ದೃಶ್ಯಗಳು ಒಂದರ ಹಿಂದೆ ಒಂದರಂತೆ ಕಾಣತೊಡಗಿದವು.
ಈಗ ಶುಭ್ರ ಆಕಾಶದಲ್ಲಿ ಸಣ್ಣ ಸಣ್ಣ ಮೋಡಗಳು ಕಾಣಿಸ ತೊಡಗಿದವು. ಸಣ್ಣ ಮೋಡಗಳಿಗೇನು? ಯಾರ ಭಯವಿಲ್ಲದೆ, ಯಾವುದೇ ಜವಾಬ್ದಾರಿಯೂ ಇಲ್ಲದೆ ಇಷ್ಟ ಬಂದ ದಿಕ್ಕಿನಂತೆ ಓಡುತ್ತ, ಮುಂದಿನ ಕಲ್ಪನೆಯಿಲ್ಲದೆ ಕೇಕೆ ಹಾಕುತ್ತಿದ್ದವು. ಆದರೆ ಅವು ಯಾವಾಗಲೂ ಅದೇ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ದೊಡ್ಡದಾಗಲೇ ಬೇಕು. ಕೆಲವು ಜವಾಬ್ದಾರಿಗಳನ್ನು ಸ್ವೀಕರಿಸಲೇಬೇಕು. ತಮ್ಮ ಜೊತೆಗೆ ನೀರನ್ನು ಕೊಂಡಯ್ಯಲೇ ಬೇಕು. ತಮ್ಮ ಅವಸಾನದ ಜೊತೆಗೆ ನೀರನ್ನು ಈ ಜಗತ್ತಿಗೆ ಉಣಿಸಿ, ಹೊಸ ಮೋಡಗಳ ಸೃಸ್ಟಿಗೆ ಕಾರಣವಾಗಲೇ ಬೇಕು. ಅದೇ ಪ್ರಕೃತಿ ನಿಯಮ. ಯೌವ್ವನ ಭರಿತ ಮೋಡಗಳಿಗೆ ನಾಳೆಯ ಕಲ್ಪನೆ ಇರುವುದಿಲ್ಲ. ಒಂದೇ ಹುಚ್ಚು. ಹೊಸ ಪ್ರಪಂಚ ನೋಡುವ ಹುಚ್ಚು. ಹೊಸ ಜೀವನ ತಿಳಿಯುವ ಹುಚ್ಚು. "ಜೀವನ ಸಂಜೆಯಲ್ಲಿ ಈ ಎಲ್ಲ ಹುಚ್ಚಿನ ಅರ್ಥಗಳು ಸ್ಪಷ್ಟವಾಗುತ್ತ ಹೋಗುತ್ತವೆ." ಆದರೆ ಸಿಡಿಲುಗಳಲ್ಲಿ ಕೊನೆಗೊಳ್ಳುವುದು ಯಾರೂ ಇಷ್ಟ ಪಡುವುದಿಲ್ಲ. ಈ ಮೋಡಗಳಿಗೆ ಜವಾಬ್ದಾರಿಯುತ ಜೀವನ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ತಾಳ್ಮೆಯೂ ಇರುವುದಿಲ್ಲ. ಸಿಡಿಲು-ಮಿಂಚುಗಳಲ್ಲಿ ಕೊನೆಗೊಳ್ಳುತ್ತವೆ.
ಜೀವನವೂ ಅಷ್ಟೆ, ಮೈಯಲ್ಲಿ ಶಕ್ತಿಯಿದ್ದಷ್ಟು ದಿನ ಉತ್ಸಾಹಿಯಾಗಿರುತ್ತದೆ, ಯಾವುದಕ್ಕೂ ಹೆದರುವುದಿಲ್ಲ. ಶಕ್ತಿಗುಂದಿದಾಗ, ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕಾದಾಗ ಎಲ್ಲವೂ ಕಷ್ಟ ಅನಿಸುತ್ತದೆ. ಸಂಜೆಯು ಶಾಂತಿ-ನೆಮ್ಮದಿಯಲ್ಲಿರಬೇಕಾದರೆ ಹಗಲಿಡೀ ಎಚ್ಚರದಲ್ಲಿರಬೇಕು, ಕಷ್ಟಪಡಬೇಕು.
ಈಗ ಮೋಡಗಳು ದೊಡ್ಡದಾಗುತ್ತಿವೆ. ಕಪ್ಪಿನ ದಟ್ಟತೆ ತೀವ್ರಗೊಳ್ಳುತ್ತಿದೆ. ದೇಹದೊಳಗಿನ ಅಸ್ತ್ರಗಳ ತಿವಿತದಿಂದ ಸಣ್ಣ ನೋವು ಪ್ರಾರಂಭವಾಯಿತು. ಮೋಡಗಳು ಅತ್ತಿಂದಿತ್ತ ಓಡಾಡ ತೊಡಗಿದವು. ಅವನ ಮನಸ್ಸಿನ್ನು ಅರ್ಥ ಮಾಡಿಕೊಳ್ಳುವಷ್ಟು ಎಚ್ಚರದಲ್ಲಿತ್ತು. ಆದರೀಗ ನೋವು ತುಂಬಾ ಜಾಸ್ತಿಯಾಗ ತೊಡಗಿತು. ಹುಚ್ಚು ಮೋಡವೊಂದು ಹೊಯ್ದಾಟ ಪ್ರಾರಂಭಿಸಿತು. ಈ ಕಷ್ಟ, ನೋವುಗಳು ಸಹಜ. ಹುಟ್ಟು-ಸಾವುಗಳು ಪ್ರಕೃತಿ ನಿಯಮ. ಕಷ್ಟದಲ್ಲೇ ಖುಷಿ ಕಾಣಬಹುದು. ಕಷ್ಟ-ಸುಖಗಳ ಚಕ್ರ ತಿರುಗುತ್ತಿರುತ್ತದೆ. ಆತ್ಮವು ಸಂತೋಷವಾಗಿದ್ದರೆ ಇಡೀ ಜಗತ್ತೇ ಖುಷಿಗೊಂಡಂತೆ ಅನ್ನಿಸುತ್ತದೆ. ಸುಖ-ದುಖಃಗಳೆರಡೂ ನಮ್ಮೊಳಗಿದೆ. ನಾವು ತೆಗೆದುಕೊಳ್ಳುವ ರೀತಿಯಲ್ಲಿದೆ. ತನ್ನ ನಿರ್ಧಾರದಲ್ಲಿದೆ. ಎಲ್ಲ ನೋವುಗಳಲ್ಲೂ ನಲಿವು ಇದ್ದೇ ಇದೆ. ತಾಯಿಯ ಹೆರಿಗೆ ಬೇನೆಯಲ್ಲೂ ಮಗುವಿನ ಹುಟ್ಟಿನ ಸಂತೋಷವಿದೆ. ಬದುಕು ಇವುಗಳಿಲ್ಲದೆ ಅಪೂರ್ಣ. ಬದುಕು ಒಂದು ಚೈತನ್ಯ...ಬದುಕಲೇಬೇಕು.
ಮೋಡಗಳ ಹೊಯ್ದಾಟ ಹೆಚ್ಚಾದವು. ಒಂದಕ್ಕೊಂದು ಮೋಡಗಳ ತಾಕಲಾಟದಿಂದ ಹೊಸ ಮಿಂಚೊಂದು ಹುಟ್ಟಿತು. ಈ ಮಿಂಚು, ಅವನ ಕಣ್ಣು ಕುಕ್ಕಿತು. ಕಣ್ಣಿಂದ ನರ-ನಾಡಿಗಳಲ್ಲಿ ಚಲಿಸಿ ರಕ್ತದಲ್ಲಿ ಸೇರಿ ಹೃದಯ, ಮಿದುಳು ನಂತರ ಇಡೀ ದೇಹವನ್ನು ಪ್ರವೇಶಿಸಿತು. ಬದುಕಿನ ಹೊಸ ಅರ್ಥ, ಹೊಸ ಕಲ್ಪನೆಯನ್ನು ತೋರಿಸಿತು. ಬದುಕಿನ ಈ ಚೈತನ್ಯ, ನೋವುಗಳೊಂದಿಗೂ ಬದುಕಬಹುದೆಂಬ ಸತ್ಯವನ್ನು ಪ್ರಜ್ವಲಿಸಿತು. ಈ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ, ಶುಭ್ರವಾದ, ನಿಶ್ಚಲವಾದ, ನಿರ್ಧಾರದ ಕನ್ನಡಿಯನ್ನು ಒಡೆಯಿತು. ನೋವು ತೀವ್ರವಾಯಿತು. ಉಸಿರಾಟ ಕಷ್ಟವಾಯಿತು.
ಅಪ್ಪ-ಅಮ್ಮ ಎಲ್ಲರೂ ಕಣ್ಮುಂದೆ ತೇಲಿ ಬಂದರು. ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅವರ ಕಡೆಗೆ ಮನಸ್ಸು ಓಗೊಡುತ್ತಿದೆ. ಆದರೆ ದೇಹ ಸಹಕರಿಸುತ್ತಿಲ್ಲ. ಓಡಿ ಅವರನ್ನೆಲ್ಲ ಸೇರಿಕೊಳ್ಳಬೇಕೆಂದು ಮನಸ್ಸು ಬಯಸುತ್ತಿದೆ...ಬದುಕಬೇಕೆಂದು ಚಡಪಡಿಸುತ್ತಿದೆ...ಕ್ಷಣ ಕ್ಷಣಕ್ಕೂ ನೋವು ಹೆಚ್ಚಾಗುತ್ತಿದೆ. ಇಡೀ ದೇಹ ಜೀವಂತವಾಗಿ ದಹಿಸುವಂತಾಗುತ್ತಿದೆ...ಇಷ್ಟವಾದ ಖರ್ಜೂರವೂ ಹೊಟ್ಟೆ ತಣಿಸುವಲ್ಲಿ ಸಫಲವಾಗಲಿಲ್ಲ. ಹೊಟ್ಟೆಯ ಬೇಗೆಗೆ ಹಿಡಿದ ನೀರಿನ ಬಾಟಲಿ ಖಾಲಿಯಾಗಿ ಅಪ್ಪಚ್ಚಿಯಾಗಿ ನನ್ನಂತೆ ಕಾಣುತ್ತಿತ್ತು. ಅಪ್ಪ ಕೊಟ್ಟ ವಾಚು, ಪವಿತ್ರದ ಉಂಗುರ ಬೇರೆ ಬಟ್ಟೆಯಲ್ಲಿ ಭದ್ರವಾಗಿ ಮೈಲಿಗೆ ಆಗದಂತೆ ಅವರಿಗಾಗಿ ಕಾಯುತ್ತಿತ್ತು...ಮನಸ್ಸು ಪುಟ್ಟ ಮಗುವಾಗಿ ಅಮ್ಮನ ಮಡಿಲೇರ ಬಯಸುತ್ತಿದೆ, ಅಕ್ಕ ನಾನು ಬರುವುದು ತಡವಾಯಿತೆಂದು ಕಾಯುತ್ತ ನಿಂತಿದ್ದಾಳೆ, ಅವಳು ನನ್ನನ್ನು ಕರೆದು ಕರೆದು ಮಾತನಾಡಿಸುತ್ತಿದ್ದಾಳೆ..ಎಲ್ಲವೂ ಮಂಜು ಮಂಜಾಗಿ ಕಾಣುತ್ತಿದೆ. ಕಣ್ಣು ಕತ್ತಲೆ ಆಗುತ್ತಿದೆ. ಮನಸ್ಸು ಕಾಣದ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಒಮ್ಮೆ ಬದುಕಿಸೆಂದು ಕೇಳಿಕೊಂಡಿತು.
ಮೋಡಗಳ ಆರ್ಭಟ ತುಂಬ ಹೆಚ್ಚಾಗುತ್ತಿದೆ. ಎಲ್ಲೆಲ್ಲು ಕತ್ತಲೆ....ಕರಾಳ ಕತ್ತಲೆ!!! ಬೆಳಕಿನ ಸುಳಿವೇ ಇಲ್ಲ...ಒಂದು ನೋವು ಅಮ್ಮಾ ಎಂದು ಚೀರಿತು. ಕೂಗು ಹೊರಗೆ ಬರಲೇ ಇಲ್ಲ. ಕತ್ತಲಾಕಾಶದಲ್ಲಿ ಮೋಡ ಒಡೆದು ಮಳೆ ಧೋ ಎಂದು ಸುರಿಯಿತು. ದೇವರ ಮನೆಯ ದೀಪ ನಂದಿತು. ಜೊತೆಗೆ ಬದುಕಿನ ಚಡಪಡಿಕೆ ಕೂಡ.. ಕನ್ನಡಿ ಹಿಡಿದ ಅವಳ ಕೈ ನಡುಗಿತು. ಕೈ ಜಾರಿ ಬಿದ್ದು ಚೂರು-ಚೂರಾಯಿತು. ಒಡೆದ ಕನ್ನಡಿಯಿಂದ ಬದುಕಿನ ಈ ಹೋರಾಟ ಸ್ಪಷ್ಟವಾಗಿ ಕಂಡಿತು. ಅವಳ ಅಳು ಮಳೆಯ ನೀರಿನೊಂದಿಗೆ, ದನಿ ಮಳೆಯ ಧೋಕಾರದೊಂದಿಗೆ ಲೀನವಾಯಿತು. ಮತ್ತೆಂದೂ ಕನ್ನಡಿ ಹಿಡಿಯುವ ಧೈರ್ಯ ಅವಳಿಗೆ ಬರಲಿಲ್ಲ... ಅವಳ ಮನದಲ್ಲಿ ಕಣ್ಣೀರು ಈಗಲೂ ಮುಗಿಲಾಗಿ-ಮಳೆಯಾಗಿ ಸುರಿಯಿತ್ತಿದೆ.

ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ
ಸತತ ಕೃಷಿಯೋ ಪೃಕೃತಿ ಮಂಕುತಿಮ್ಮ -- ಎಂದು ಬರೆದ ಡಿ.ವಿ.ಜಿ.ಯೂ ಕಾಲ ಗರ್ಭದಲ್ಲಿ ಒಂದಾಗಿದ್ದಾರೆ.

"ಸಾವು ಹುಟ್ಟಿನ ಮೂಲ. ಈ ಪ್ರಪಂಚದಲ್ಲಿ ಕಾಲ ಚಕ್ರ ಹುಟ್ಟು-ಸಾವುಗಳ ನಡುವೆ ಹೊಸ ನೆನಪುಗಳನ್ನು ಕೊಡುತ್ತ ತಿರುಗುತ್ತಿರುತ್ತದೆ."

12 Comments:

Blogger Sandeepa said...

ಒಳ್ಳೆಯ ಬರವಣಿಗೆ.

6/28/2007 7:25 AM  
Blogger Jagali bhaagavata said...

ಇದು ನಿಮ್ಮದೆ ಕಥೆಯಾ?

6/29/2007 6:44 PM  
Blogger Gubbacchi said...

ಅಂದ್ರೆ ಎಂತ ಭಾಗ್ವತ್ರೆ?? ನಾನ್ ಬರ್ದದ್ ಹೌದಾ ಅಲ್ದಾ ಅಂತವಾ?

7/01/2007 9:34 PM  
Blogger Jagali bhaagavata said...

ಬರ್ದದ್ದ್ ನೀವ್ ಅಂತ ಗೊತ್ತಿತ್. ಬೇರೆ ಅರ್ಥದಲ್ಲಿ:-)

7/01/2007 9:44 PM  
Anonymous Anonymous said...

ಅಬ್ಬಾ ಎಂಥಾ ಕಲ್ಪನೆ.

ಆತ್ಮ ಹತ್ಯೆ ಮಾಡಿಕೊಳ್ಳವ ಪ್ರ್ತತಿ ಒಬ್ಬನ ಮನಸ್ಸಿನಲ್ಲು ಈ ಭಾವನೆಗಳಿರಬಹುದೇ.

ನೀಲಿಯ ಆಗಸ ನನ್ನ ಪಾಲಿಗೆ ಯಾವತ್ತು ನೆಮ್ಮದಿಯ ಸಂಖೇತ.
ಮೋಡಗಳು ಯಾವಾಗಲು ಮೂಡ್ ಆಫ್ ಮಾಡುತ್ತವೆ.

ಇದನ್ನು ಓದಿ ಕಣ್ಣೀರಾದೆ ಗುಬ್ಬಚ್ಚಿಯವರೆ. ಮನ ಕಲಕಿತು.

7/06/2007 11:20 PM  
Blogger Susheel Sandeep said...

ಗುಬ್ಬಚ್ಚಿ,
"ಅವಳ ಚೀಲಕ್ಕೆ ಒಂದೊಂದೇ ಕಲ್ಲು ಹಾಕಿ, ಮೌನವಾಗಿ ಹಿಂಬಾಲಿಸಿ, ಅವಳು ಪುಸ್ತಕ ಹೊರತೆಗೆಯುವಾಗ ಸಿಗುವ ಕಲ್ಲುಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದ ಅವಳನ್ನು ನೋಡುವಾಗ ನನಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದೆ." -ನಿಜಕ್ಕೂ ನೈಜವಾಗಿದೆ ಕಣ್ರೀ ನಿಮ್ಮ ಎಕ್ಸ್‍ಪ್ರೆಶನ್ಸ್!
ನಿಮ್ಮ ಕನ್ನಡ ಲೇಖನವನ್ನ ಇದೇ ಮೊದಲ ಬಾರಿಗೆ ನಾ ಓದ್ತಿರೋದು. ಅಬ್ಬಾ...ನಿಜವಾಗಿ ಅಂತಃಕರಣ ಕಲಕಿಸುವಂತಿದೆ ಈ ಬರಹ.ಹೀಗೆ ಬರೀತಿರಿ.

7/15/2007 8:47 PM  
Blogger dinesh said...

ತುಂಬಾ ಚೆನ್ನಾಗಿದೆ..ಬರವಣಿಗೆ...ನಮ್ಮ ಅಕ್ಕನ ನೆನಪಾಯ್ತು..

7/18/2007 12:46 AM  
Blogger Shree said...

ತಡವಾಗಿ ಬಂದೆ ಇಲ್ಲಿಗೆ ಈಸಲ.
ಗುಬ್ಬಚ್ಚಿ, ನಿಮ್ಮದೆ ಕಥೆಯಾ ಬೇರೆವ್ರ ಕಥೆಯಾ ಅಂತ ತಲೆಕೆಡಿಸಿಕೊಳ್ಳಬೇಡಿ, ಅಜ್ಞಾತವಾಸ ಹೋಗಬೇಡಿ. ಬರೆಯೋದು ಬಿಡಬೇಡಿ. ಅವಾಗಾವಾಗ ಬರ್ತಿರ್ತೀನಿ.

7/20/2007 7:08 AM  
Blogger Enigma said...

enu gubaachi elli hari hode?

7/31/2007 11:50 AM  
Blogger ಸಿಂಧು sindhu said...

ಗುಬ್ಬಚ್ಚಿಯವರೆ,

ತುಂಬ ಹಿಡಿಸಿದ ಬರಹ. ಭಾವತೀವ್ರತೆಯನ್ನ ಸಹಜ ಪದಗಳಲ್ಲಿ ಮನಮುಟ್ಟುವಂತೆ ಬರೆದಿದ್ದೀರಿ..
ಇಷ್ಟವಾಯಿತು.

8/27/2007 8:51 AM  
Blogger ರೇಣುಕಾ ನಿಡಗುಂದಿ said...

ತುಂಬಾ ಚೆನ್ನಾಗಿದೆ

1/16/2008 2:49 AM  
Anonymous Anonymous said...

i agree your idea ! very nice blog

1/06/2009 4:37 AM  

Post a Comment

<< Home